ಹರಳಯ್ಯ ಸಮಗಾರ ಸಮುದಾಯದ ಕುರಿತು ನಡೆದ ವೆಬಿನಾರ

ಹುಬ್ಬಳ್ಳಿ: ಹರಳಯ್ಯ ಸಮಗಾರ ಸಮಾಜದ ಹಕ್ಕುಗಳ ರಕ್ಷಣೆಗೆ ನಡೆಯುವ ಹೋರಾಟಕ್ಕೆ ಮಾರ್ಗದರ್ಶನ ಮಾಡಲು ಬುದ್ಧಿಜೀವಿಗಳ ವೇದಿಕೆಯೊಂದು ಅಸ್ತಿತ್ವಕ್ಕೆ ಬರಬೇಕು ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಮ್ಮವರ ಸಮಸ್ಯೆಗಳ ಕುರಿತು ನಿರಂತರ ಚರ್ಚೆ ನಡೆಯಬೇಕು ಎಂದು ಸಮಾಜದ ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಮಾನ ಮನಸ್ಕರ ಈಚೆಗೆ ಹಮ್ಮಿಕೊಂಡಿದ್ದ ಆನ್ ಲೈನ್ (ವೆಬಿನಾರ್)‌ ಚರ್ಚಾಗೋಷ್ಠಿಯೊಂದರಲ್ಲಿ ಭಾಗವಹಿಸಿದ್ದ ಅವರು, ನಮ್ಮಲ್ಲಿನ ಸಂಕುಚಿತ ಸ್ವಭಾವ ತೊಡೆದುಹಾಕಿ, ಸಂಘಟಿತರಾಗಬೇಕಿದೆ. ಈಗ ನಾವು ಒಂದಾಗಿ ಹೋರಾಡದಿದ್ದರೆ, ಇನ್ನೆಂದೂ ಉದ್ಧಾರವಾಗುವುದಿಲ್ಲ ಎನ್ನುವ ಅಭಿಪ್ರಾಯವನ್ನು ಅವರು ಒಕ್ಕೊರಲಿನಿಂದ ವ್ಯಕ್ತಪಡಿಸಿದರು.

ಆರಂಭದಲ್ಲಿ ಮಾತನಾಡಿದ, ಬಾಗಲಕೋಟಿಯ ಎಲ್ಲಪ್ಪ ಬೆಂಡಿಗೇರಿ, ಸಮಗಾರರು ಸ್ವಾಭಿಮಾನಿಗಳು. ಅವರು ಎಂತಹದೇ ಸಂಕಷ್ಟದ ಪರಿಸ್ಥಿತಿ ಇದ್ದರೂ ಇನ್ನೊಬ್ಬರ ಮುಂದೆ ಕೈ ಚಾಚುವುದಿಲ್ಲ. ಆದರೆ, ಅವರಿಗೆ ನ್ಯಾಯವಾಗಿ ಸಿಗಬೇಕಾದ ಶೈಕ್ಷಣಿಕ, ಆರ್ಥಿಕ ಸೌಲಭ್ಯಗಳು ಸಿಗುತ್ತಿಲ್ಲ. ಇದು ದುರಂತ, ಎಂದರು.

ನಾವು ಇನ್ನೊಬ್ಬರಿಗೆ ಟಿಂಗಲ್ ಮಾಡುವ ಚಿಲ್ಲರೆ ಗುಣದಿಂದ ಹೊರಬರಬೇಕು. ‘ನಾನೇನು’ ಎನ್ನುವುದರ ಕುರಿತು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ಸಮಾಜದಲ್ಲಿನ ನಾಯಕರು, ವ್ಯದ್ಯರು, ಪತ್ರಕರ್ತರು, ಮತ್ತು ವಿದ್ಯಾವಂತರು ನಮ್ಮವರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು. ನಮ್ಮವರು ಯಾರಾದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‍ಗಾಗಿ ಪ್ರಯತ್ನಿಸಿದರೆ ಸಮಾಜ ಅವರನ್ನು ಬೆಂಬಲಿಸಬೇಕು. ನಮ್ಮ ಸಮಾಜದ ಅಧಿಕಾರಿಗಳು ತಮ್ಮ ಇತಿಮಿತಿಯಲ್ಲಿ ನಮ್ಮವರಿಗೆ ಮುಕ್ತವಾಗಿ ಸಹಾಯಮಾಡಲು ಮುಂದಾದರೆ ನಮ್ಮ ಪ್ರಗತಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು.

ಕಲಬುರಗಿಯಿಂದ ಮಾತನಾಡಿದ, ಭೀಮಾಶಂಕರ ತದ್ದೇವಾಡಿ, ನಮ್ಮ ಹೋರಾಟ ಇನ್ನಷ್ಟು ಗಟ್ಟಿಯಾಗಲು ಅದಕ್ಕೆ ಧಾರ್ಮಿಕ ರೂಪ ಕೊಡಬೇಕಾಗಿದೆ. ನಮಗೊಬ್ಬ ಧರ್ಮಗುರು ಬೇಕಾಗಿದೆ. ಸಂತ ರವಿದಾಸ ಅಥವಾ ಹರಳಯ್ಯ ಅವರಂತಹ ಮಹಾನ್ ಪುರುಷರ ಸಂಕೇತಗಳು ಸಮಗಾರರನ್ನು ಒಗ್ಗೂಡಿಸಿ, ನಮ್ಮ ಹೋರಾಟದ ಚಿತ್ರಣವನ್ನೇ ಬದಲಾಯಿಸಬಹುದು, ಎಂದರು.

ನಮ್ಮಲ್ಲಿ ಹೋರಾಟದ ಛಲದ ಕೊರತೆಯಿದೆ. ಸ್ವಾರ್ಥ ಜಾಸ್ತಿ. ಇನ್ನೊಬ್ಬರ ಪ್ರಗತಿ ಕಂಡು ಅಸೂಯೆ ಪಡುತ್ತೇವೇಯೇ ಹೊರತು, ನಾವೂ ಹಾಗೆ ಸಾಧನೆ ಮಾಡಬಹುದು ಎಂದು ಯಾವತ್ತೂ ಯೋಚಿಸುವುದಿಲ್ಲ. ಇವು ನಮ್ಮ ಸಂಘಟಣೆಗೆ ಇರುವ ಮೂಲ ತೊಡಕುಗಳು.

3-ಬಿ ತತ್ವ

ಬುದ್ಧ-ಬಸವ-ಬಾಬಾಸಾಹೇಬ (3-ಬಿ) ತತ್ವಗಳ ಆಧಾರದ ಮೇಲೆ ಹೋರಾಟ ರೂಪಿಸಿ, ಕೇಡರ್-ಬೇಸ್ಡ್ ಸಂಘಟನೆ ಹುಟ್ಟುಹಾಕಬೇಕು. ನಮ್ಮಲ್ಲಿ ಪ್ರಾಮಾಣಿಕ ನಾಯಕರ ಸಂಖ್ಯೆ ಕಡಿಮೆ. ಹಣಕಾಸಿನ ದುರುಪಯೋಗ ಜಾಸ್ತಿ. ಇದು ನಿಲ್ಲಬೇಕು. ತ್ರಿಮತಸ್ಥರು (ಸಮಗಾರ, ಢೋಹರ, ಮಚಗಾರರು) ಒಂದಾಗುವ ಸಾಧ್ಯತೆಗಳನ್ನು ಯೋಚಿಸಬೇಕು. ಪ್ರತೀ ಜಿಲ್ಲೆಯಲ್ಲಿ ಒಬ್ಬರನ್ನು ನೇಮಕ ಮಾಡಿ ಆಯಾ ಜಿಲ್ಲೆಯಲ್ಲಿನ ನಮ್ಮವರ ಮಾಹಿತಿ (ಡಾಟಾ-ಬೇಸ್) ಸಂಗ್ರಹಿಸಬೇಕಾಗಿರುವುದು ಸದ್ಯದ ತುರ್ತು, ಎಂದರು.

ನಮ್ಮ ಸಮಾಜದಲ್ಲಿ ಕಲಿತವರು ತಾವಷ್ಟೇ ಮುಂದೆ ಹೋಗುತ್ತಿದ್ದಾರೆ; ಅವರು ಹಿಂದುಳಿದವರನ್ನು ಮೇಲೆತ್ತುತ್ತಿಲ್ಲ ಎನ್ನುವುದೇ ನಮ್ಮ ದೊಡ್ಡ ಸಮಸ್ಯೆ, ಎಂದು  ವಿಷಾದ ವ್ಯಕ್ತಪಡಿಸಿದ ಧಾರವಾಡದ ಡಾ ಮಾರುತಿ ಹೆಬ್ಬಳ್ಳಿ, ನಮ್ಮ ಸಮಾಜದ ಅಭಿವೃದ್ಧಿಗೆ ಒಂದು ಮಾದರಿ ಬೇಕಾಗಿದೆ. ಅಂತಹ ಒಂದು ಮಾದರಿ ಬಗೆಗೆ ಚಿಂತನೆ ನಡೆಸಬೇಕಾದ ಅಗತ್ಯವಿದೆ. ನಮ್ಮ ಸಮಾಜದ ಸದಸ್ಯರ ಸಮಸ್ಯೆಗಳ ಬಗೆಗೆ ಪ್ರತೀ ಜಿಲ್ಲೆಯಲ್ಲಿ ಚರ್ಚೆಯಾಗಬೇಕು ಅಂದಾಗ ಮಾತ್ರ ರಾಜಕಾರಿಣಿಗಳು, ಸರಕಾರ ನಮ್ಮತ್ತ ಗಮನ ಹರಿಸುತ್ತವೆ, ಎಂದರು.

ನಮ್ಮ ಯುವಕರಲ್ಲಿ ಸಮಾಜಿಕಿ ಕಳಕಳಿ ಕಡಿಮೆಯಾಗುತ್ತಿದೆ ಎಂದು ಹೇಳಿದ ಅವರು, ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಟ್ಟು, ನಮ್ಮ ಹಿಂದಿನ ಪರಿಸ್ಥಿತಿ ಹೇಗಿತ್ತು, ನಮ್ಮ ಸಮಾಜದ ಸಂಘಟನೆ ಹೇಗೆ ಮಾಡಬೇಕು ಎನ್ನುವುದನ್ನು ತಿಳಿಸಿ ಹೇಳಬೇಕಾಗಿದೆ. ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಕಾನ್ಸಿರಾಮ ರ ಮಾದರಿಯಲ್ಲಿ ಹೋರಾಟ ನಡೆಸಿದರೆ ನಮ್ಮ ಸಮಾಜದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಬಹುದೇನೊ, ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಧಾರ್ಮಿಕ ಕ್ರಾಂತಿ

ಧಾರ್ಮಿಕ ಕ್ರಾಂತಿ ಮತ್ತು ಸಂವಿಧಾನದ ರಕ್ಷಣೆಯಿಂದ ಮಾತ್ರ ಹರಳಯ್ಯ ಸಮಗಾರ ಸಮಾಜದ ಉದ್ಧಾರ ಸಾಧ್ಯ ಎಂದು ಪ್ರತಿಪಾದಿಸಿದ ಹುಬ್ಬಳ್ಳಿಯ ಬಸವರಾಜ ತೇರದಾಳ, 3-ಬಿ ತತ್ವಗಳ ಆಧಾರದ ಮೇಲೆ ನಮ್ಮ ಹೋರಾಟ ನಿರ್ಮಿಸಬೇಕಾಗಿದೆ. ಬಸವ-ಹರಳಯ್ಯನವರ ಬಗೆಗೆ ನಮ್ಮವರಲ್ಲಿ ಹೆಚ್ಚು ತಿಳಿವಳಿಕೆ ಮೂಡಿಸಬೇಕಾಗಿದೆ. ದುರುದ್ದೇಶದ ಸಂವಿದಾನ ತಿದ್ದುಪಡಿಗಳನ್ನು ಉಗ್ರವಾಗಿ ಖಂಡಿಸಬೇಕು, ಎಂದರು.

ನಮ್ಮನಮ್ಮೊಳಗಿನ ಕಚ್ಚಾಟ, ವಿನಾಕಾರನ ಟೀಕೆ ನಿಲ್ಲಬೇಕು. ನಮ್ಮ ಹಕ್ಕುಗಳಿಗಾಗಿ ಹೋರಾಡಲು ಪಣತೊಡೋಣ ಎಂದು ತಿಳಿಸಿದರು.

ಚರ್ಚಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ, ಕರ್ನಾಟಕ ರಾಜ್ಯ ಸಮಗಾರ ಹರಳಯ್ಯ ಸಂಘದ ಅಧ್ಯಕ್ಷರಾದ ಜಗಧೀಶ ಬೆಟಗೇರಿ, ಸಮಗಾರ ಸಮುದಾಯವನ್ನು ಪ್ರತಿನಿಧಿಸುವ ಸಂಘಟಣೆಯ ರಾಜ್ಯಾಧ್ಯಕ್ಷರಾಗಿ ತಮ್ಮ ಸಮಯ ಹಾಗೂ ಸಂಪನ್ಮೂಲಗಳ ಇತಿಮಿತಿಯಲ್ಲೇ ಸಂಘದ ಎಲ್ಲ ಪದಾಧಿಕಾರಿಗಳು ಸಮಾಜದ ಪ್ರಗತಿಗಾಗಿ ಸಾಕಷ್ಟು ಶ್ರಮಿಸಿದ್ದೇವೆ. ಬೆಂಗಳೂರಿನಲ್ಲಿ ಸಂಘಕ್ಕೆ ಮಂಜೂರಾದ ಅಮೂಲ್ಯವಾದ ಜಾಗದ ರಕ್ಷಣೆ, ಸಮಾಜದ ಬಂಧುಗಳ ಸಮಸ್ಯೆಗಳಿಗೆ ಶಕ್ತಿ ಮೀರಿ ಸ್ಪಂದಿಸಲು ಪ್ರಯತ್ನಿಸಿದ್ದೇವೆ. ಬಹಳಷ್ಟು ಸಂದಭ೯ಗಳಲ್ಲಿ ನಮ್ಮ ಸ್ವಂತ ಹಣ ಖಚು೯ಮಾಡಿ ಸಮಾಜದ ಸದಸ್ಯರ ಏಳ್ಗೆಗಾಗಿ ದುಡಿದಿದ್ದೇವೆ. ಬೆಂಗಳೂರಿನಲ್ಲಿ ನಮ್ಮ ಸಂಘಕ್ಕೆ ಸಿಕ್ಕ ಸೈಟಿನಲ್ಲಿ, ಸರಕಾರದ ಧನಸಹಾಯದೊಂದಿಗೆ ಒಂದು ಬೃಹತ್‌ ಕಟ್ಟಡ ನಿಮಾ೯ಣ ಮಾಡಿ, ಅಲ್ಲಿ ನಮ್ಮ ಸಮಾಜದ ವಿದ್ಯಾಥಿ೯ಗಳಿಗೆ ಹಾಸ್ಟೆಲ್‌, ನಮ್ಮವರು ಬೆಂಗಳೂರಿಗೆ ಕೆಲಸಕ್ಕೆ ಹೋದಾಗ ಉಳಿದುಕೊಳ್ಳಲು ಒಂದು ವಸತಿಗೃಹ, ಸಂಘದ ಒಂದು ಬೃಹತ್‌ ಸಭಾಭವನ ನಿಮಾ೯ಣ ಮಾಡಬೇಕೆನ್ನುವ ಗುರಿ ಇದೆ. ಎಲ್ಲರ ಸಹಕಾರ ಇದ್ದರೆ, ಅದು ಖಂಡಿತ ಸಾಧ್ಯ, ಎಂದರು.

ಸಮಾಜದ ಅಭಿವೃದ್ಧಿಗಾಗಿ ಇಷ್ಟೆಲ್ಲ ಶ್ರಮಿಸುತ್ತಿದ್ದರೂ ಕೆಲವರು ವಿನಾಕಾರಣ ಟೀಕೆ ಮಾಡುತ್ತಾರೆ. ಅಂತಹ ದುರುದ್ದೇಶದ ಟೀಕೆಗಳು ಮನಸ್ಸಿಗೆ ನೋವು ಉಂಟು ಮಾಡುತ್ತವೆ. ಇದರಿಂದ ಸಂಘಟಣೆ ಕುಂಠಿತಗೊಳಿಸುತ್ತದೆ. ಟೀಕೆ ಇರಲಿ. ಆದರೆ, ಅದು ಧನಾತ್ಮಕವಾಗಿರಲಿ. ತಪ್ಪುಗಳಿದ್ದರೆ ಕುಳಿತು ಚಚಿ೯ಸಿ. ತಪ್ಪಿದ್ದರೆ ತಿದ್ದಿಕೊಳ್ಳೋಣ, ಸಮಸ್ಯೆಗಳಿದ್ದರೆ ಸರಿಪಡಿಸೋಣ. ಒಳ್ಳೆಯ ಸಲಹೆ, ಮಾಗದಶ೯ನ ಯಾರಾದರು ನೀಡಿದರೆ ಖಂಡಿತ ಸ್ವೀಕರಿಸೋಣ. ಅದರಂತೆಯೇ ಸಂಘವನ್ನು ಮುನ್ನಡೆಸೋಣ, ಎಂದರು.

ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು

ತಾಂತ್ರಿಕ ಕಾರಣಗಳಿಂದ ಕಾರವಾರದ ಸುಭಾಸ ಕಾನಡೆ ವೆಬಿನಾರನಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದರೆ, ಸಂದೇಶದ ಮೂಲಕ ಅವರು, ನಾವು ಯೋಜನೆಗಳನ್ನು ಹಾಕಿಕೊಂಡು, ಅವುಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಶೈಕ್ಷಣಿಕ, ಆರೋಗ್ಯ ಹಾಗೂ ಹಣಕಾಸು ಸಂಸ್ಥೆಗಳನ್ನು ಸ್ಥಾಪಿಸಬೇಕು. ರಾಜಕೀಯ ಪಕ್ಷಗಳನ್ನು ಸಮಾಜದಿಂದ ದೂರವಿಡಬೇಕು. ರಾಜಕೀಯದಿಂದಲೇ ನಾವು ಇಲ್ಲಿಯವರೆಗೆ ಹಿಂದುಳಿಯಲು ಕಾರಣ. ನಮ್ಮ ಚರ್ಮೋದ್ಯಮವನ್ನು ಹೇಗೆ ಪುನರುಜ್ಜೀವನಗೋಳಿಸಬೇಕು, ಇದನ್ನು ಲಾಭದಾಯಕ ಮಾಡಲು ಅಳವಡಿಸಿಕೊಳ್ಳಬೇಕಾದ ನವೀನ ತಂತ್ರಗಳೇನು ಎನ್ನುವುದರ ಕುರಿತು ಚಿಂತನೆ ನಡೆಸಬೇಕು ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿಯಿಂದ ರಾಜು ವಿಜಾಪೂರ ಈ ಕಾಯ೯ಕ್ರಮವನ್ನು ನಿವ೯ವಹಿಸಿದರು.

Leave a Reply

Your email address will not be published. Required fields are marked *